ಕನ್ನಡ ಕನ್ನಡಿ

ವಾರಕ್ಕೆ ಐದು ಪದಗಳಂತೆ, ತಾಂತ್ರಿಕ/ವೈಜ್ಞಾನಿಕ ಕ್ಷೇತ್ರದ ಪದಗಳಿಗೆ ಕನ್ನಡ ಸಂವಾದಿ ಪದಗಳ ಪರಿಚಯ ಮಾಡುವ ಅಂಕಣವಿದು. ಕನ್ನಡದಲ್ಲಿ ಹೊಸ ಜ್ಞಾನ ನಿರ್ಮಾಣ ಆಗಬೇಕೆಂದರೆ ಅದರ ಪದಕೋಶವು ವಿಸ್ತಾರಗೊಳ್ಳಬೇಕು. ಈ ದಿಸೆಯಲಿನ್ಲ ಕಿರುಪ್ರಯತ್ನವೇ ಈ ಅಂಕಣ.

Magnetic dipole

ಮ್ಯಾಗ್ನೆಟಿಕ್ ಡೈಪೋಲ್ – ಕಾಂತೀಯ ದ್ವಿಧ್ರುವ – ಪರಸ್ಪರ ತುಸು ದೂರವಿರುವ, ಯಾವಾಗಲೂ ಜೊತೆಯಲ್ಲೇ ಬರುವ ಅಯಸ್ಕಾಂತೀಯ ಉತ್ತರ ಹಾಗೂ ದಕ್ಷಿಣ ಧ್ರುವಗಳು‌.

Magnetic disk

ಮ್ಯಾಗ್ನೆಟಿಕ್ ಡಿಸ್ಕ್ – ಕಾಂತೀಯ ಬಿಲ್ಲೆ ಅಥವಾ ಕಾಂತೀಯ ತಲೆಚಕ್ರ – ಗಣಕಯಂತ್ರದಲ್ಲಿ ಧ್ವನಿಮುದ್ರಿಸುವ ಮಾಧ್ಯಮವಾಗಿ ಬಳಸುವ, ಸಾಮಾನ್ಯವಾಗಿ 35.6 ಸೆಂ.ಮೀ. ವ್ಯಾಸವನ್ನು ಹೊಂದಿರುವ ಒಂದು ತೆಳ್ಳನೆಯ ಅಲ್ಯೂಮಿನಿಯಂ ಬಿಲ್ಲೆ. ಇದರ ಎರಡೂ ಮೇಲ್ಮೈಗಳಿಗೆ ಕಾಂತೀಯ ಕಬ್ಬಿಣದ ಆಕ್ಸೈಡನ್ನು ಲೇಪಿಸಿರುತ್ತಾರೆ.

Magnetic domain

ಮ್ಯಾಗ್ನೆಟಿಕ್ ಡೊಮೇನ್ – ಕಾಂತೀಯ ಪ್ರಾಂತ್ಯ – ಪ್ರಬಲಕಾಂತ ವಸ್ತುಗಳಲ್ಲಿ 1- 0.1  ಮಿಮೀ ಅಗಲವಿರುವ ಅಯಸ್ಕಾಂತಗೊಂಡ ಪ್ರದೇಶಗಳಿರುತ್ತವೆ. ಇವನ್ನು ಕಾಂತೀಯ ಪ್ರಾಂತ್ಯಗಳು ಎನ್ನುತ್ತಾರೆ.

Magnetic elements

ಮ್ಯಾಗ್ನೆಟಿಕ್ ಎಲಿಮೆಂಟ್ಸ್ – ಕಾಂತೀಯ ಅಂಶಗಳು – ಕಾಂತೀಯ ಇಳಿಜಾರು, ಕಾಂತೀಯ ಇಳಿಜಾರು ಕೋನ ಮತ್ತು ಭೂಮಿಯ ಕಾಂತಕ್ಷೇತ್ರದ ಅಡ್ಡರೇಖೆಯ ಭಾಗಾಂಶ – ಇವು, ಭೂಮಿಯ ಕಾಂತಕ್ಷೇತ್ರವನ್ನು ಸಂಪೂರ್ಣವಾಗಿ ನಿಷ್ಕರ್ಷೆ ಮಾಡುತ್ತವೆ.

Magnetic equator

ಮ್ಯಾಗ್ನೆಟಿಕ್ ಈಕ್ವೇಟರ್ – ಕಾಂತೀಯ ಭೂಮಧ್ಯರೇಖೆ – ಭೂಮಿಯ ಸುತ್ತಲೂ ಇರುವ ಅನಿಯಮಿತ, ಕಲ್ಪಿತ ರೇಖೆ ಇದು. ಇಲ್ಲಿ‌ ಭೂಮಿಯ ಕಾಂತೀಯ ಕ್ಷೇತ್ರರೇಖೆಗಳು ಮೇಲ್ಮೈಗೆ, ಬಹು ನಿಖರವಾಗಿ ಸಮಾನಾಂತರವಾಗಿರುತ್ತವೆ. 

Magnetic field

ಮ್ಯಾಗ್ನೆಟಿಕ್ ಫೀಲ್ಡ್ – ಕಾಂತಕ್ಷೇತ್ರ – ಯಾವ ಪ್ರದೇಶದಲ್ಲಿ, ಒಂದು ಚಿಕ್ಕ ಅಯಸ್ಕಾಂತ ಅಥವಾ ವಿದ್ಯುತ್ತನ್ನು ಒಯ್ಯುತ್ತಿರುವ ಒಂದು ಮಂಡಲ( ತಂತಿಯ ಕುಣಿಕೆ) ಒಂದು ಬಲವನ್ನು ಅನುಭವಿಸುತ್ತದೋ ಆ ಪ್ರದೇಶ.

Magnetic flux

ಮ್ಯಾಗ್ನೆಟಿಕ್ ಫ್ಲಕ್ಸ್ –  ಕಾಂತೀಯ ಬಲರೇಖೆಗಳು – ಒಂದು ಮೇಲ್ಮೈ ಯನ್ನು ಹಾದುಹೋಗುವ ಒಟ್ಟು ಪ್ರಚೋದನೆಯ ರೇಖೆಗಳ ಮೊತ್ತಕ್ಕೆ ಸಮ‌ ಇದು. ಇದರ ಮೂಲಮಾನ‌ Weber (ವೆಬರ್).

Magnetic head

ಮ್ಯಾಗ್ನೆಟಿಕ್ ಹೆಡ್ – ಕಾಂತೀಯ ಪ್ರಮುಖ – ಒಂದು‌ ಕಾಂತೀಯ ದಾಖಲುಕಾರಕದಲ್ಲಿ ವಿದ್ಯುತ್ತೀಯ ಕಂಪನಗಳನ್ನು ಕಾಂತೀಯ ಪಟ್ಟಿಯ ಮೇಲೆ ಸಂಗ್ರಹಿಸುವುದಕ್ಕಾಗಿ, ಕಾಂತೀಯ ಕಂಪನಗಳನ್ನಾಗಿ ಪರಿವರ್ತಿಸುವಂತಹ ಶಕ್ತಿ ನಿರ್ವಾಹಕ ಇದು‌.

Magnetic hysteresis

ಮ್ಯಾಗ್ನೆಟಿಕ್ ಹಿಸ್ಟೆರಿಸಿಸ್ – ಕಾಂತೀಯ ಉಳಿಕೆ ಪರಿಣಾಮ ( ವಿಲಂಬನ) – ಪ್ರಬಲ‌ ಕಾಂತವಸ್ತುಗಳನ್ನು ಕಾಂತಗೊಳಿಸಿಯಾದ ಮೇಲೆ, ಆ ಕಾಂತತ್ವವನ್ನು ತೆಗೆದ ಮೇಲೂ ಅವುಗಳಲ್ಲಿ ಸ್ವಲ್ಪ ಕಾಂತೀಯತೆ ಉಳಿದಿರುತ್ತದೆ. ಹೀಗೆ ಕಾಂತೀಯತೆಯು ಉಳಿಯುವುದನ್ನು ‘ಕಾಂತೀಯ ಉಳಿಕೆ ಪರಿಣಾಮ’ ಎನ್ನುತ್ತಾರೆ.

Magnetic Induction

ಮ್ಯಾಗ್ನೆಟಿಕ್ ಇಂಡಕ್ಷನ್ – ಕಾಂತೀಯ ಪ್ರೇರಣೆ – ಬಾಹ್ಯ ಕಾಂತಕ್ಷೇತ್ರವೊಂದರಿಂದ ಒಂದು ವಸ್ತುವಿನ‌ ಅಯಸ್ಕಾಂತೀಕರಣ. ಕಾಂತೀಯ ವಸ್ತುವಿನ ತುಂಡೊಂದನ್ನು ಪ್ರಬಲ ಅಯಸ್ಕಾಂತದ ಪಕ್ಕದಲ್ಲಿಟ್ಟಾಗ ಅದರಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವಗಳು ಆವಾಹಿತವಾಗುತ್ತವೆ. ಈಗ ಈ ಕಾಂತೀಯ ವಸ್ತುವಿನ ತುಂಡು ಒಂದು ಪ್ರೇರಿತ ಅಯಸ್ಕಾಂತದಂತೆ ವರ್ತಿಸುತ್ತದೆ ಮತ್ತು ಇನ್ನೊಂದು ಅಯಸ್ಕಾಂತದಿಂದ ಆಕರ್ಷಿತವಾಗುತ್ತದೆ.

Page 96 of 100

Kannada Sethu. All rights reserved.