ಶಿವರಾಮ ಕಾರಂತ, ಬಿ.ಜಿ.ಎಲ್‌‌. ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಟಿ.ಆರ್.ಅನಂತರಾಮು, ಟಿ.ಜಿ.ಶ್ರೀನಿಧಿ ಮುಂತಾದ  ಕನ್ನಡದ ವಿಜ್ಞಾನ ಲೇಖಕರ ಪಟ್ಟಿಗೆ ಒಂದು ಸಮರ್ಥ ಸೇರ್ಪಡೆ ಎನ್ನಬಹುದಾದ ಒಂದು ಹೆಸರು ಎಚ್.ಎ. ಪುರುಷೋತ್ತಮ ರಾವ್ ಅವರದು. ಕೋಲಾರದ ಈ ಲೇಖಕರು ಈಗಾಗಲೇ ಏಳು ಪರಿಸರ ವಿಜ್ಞಾನ ಕೃತಿಗಳನ್ನು ಪ್ರಕಟಿಸಿ ಕಳೆದ ಭಾನುವಾರ ( 23-08-2026) ದಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಎಂಟನೆಯ ಕೃತಿ ‘ಈಚಲ ಗರಿ ಹೆಣಿಗೆ’ ಯನ್ನು ಪ್ರಕಟಿಸಿದರು. ಬಾಲ್ಯದಿಂದಲೂ ಪರಿಸರದ ಬಗ್ಗೆ ಆಸಕ್ತಿ, ಕುತೂಹಲಗಳನ್ನು ಹೊಂದಿದ್ದ ಇವರು ಅರಣ್ಯ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದಾಗ, ತಮ್ಮ ಮೂಲ ಆಸಕ್ತಿಗೆ ಪೂರಕವೇ ಆಗಿದ್ದ ಅಲ್ಲಿನ ಅನುಭವಗಳನ್ನು ತಮ್ಮ ಕೃತಿಗಳ ಹೂರಣವಾಗಿ ಮಾಡಿಕೊಂಡು ಬರೆದವರು. ಓದುಗಸ್ನೇಹಿಯಾದ ತಿಳಿಬೆಳಕಾದ ಭಾಷೆಯಲ್ಲಿ ಮೃದುಹಾಸ್ಯದೊಂದಿಗೆ ಬರೆಯುವ ಇವರ ಬರವಣಿಗೆಯು ಪರಿಸರದ ಬಗ್ಗೆ ಓದುಗರಿಗೆ ಹೊಸ ಕಣ್ಣುಗಳನ್ನು ನೀಡಲು ಸಮರ್ಥವಾಗುವಷ್ಟು ಚೇತೋಹಾರಿಯಾಗಿದೆ.

ಮೇಲೆ ನಾನು ಪ್ರಸ್ತಾಪಿಸಿದ ‘ಈಚಲ ಗರಿ ಹೆಣಿಗೆ’ ಕೃತಿಯಲ್ಲಿ ಅವರು ಬಳಸಿದ ಒಂದು ಪದ ನನ್ನ ಗಮನ ಸೆಳೆಯಿತು. ‘ ‘ಕುಂಭಕೃಷಿ’  ಎಂಬ ಪದ ಅದು. ಮಡಕೆ ಮಾಡುವುದನ್ನು ಇವರು ಕುಂಭಕೃಷಿ ಎಂದು ಕರೆದಿದ್ದಾರೆ. ‘ಕುಂಬಾರಿಕೆಯು (ಮಡಕೆಗಳನ್ನು ಮಾಡುವ ಕೆಲಸ)

ಗ್ರಾಮೀಣ ಪರಿಸರದಲ್ಲಿ ಎಂತಹ ಮಹತ್ವದ ಪಾತ್ರ ವಹಿಸುತ್ತಿತ್ತು, ಹಾಗೂ ಇಂದು ಆ ಮೂಲ ಕುಲಕಸುಬು ಎಷ್ಟು ತೀವ್ರವಾದ ಅಳಿವಿನ ಅಪಾಯವನ್ನು ಎದುರಿಸುತ್ತಿದೆ’ ಎಂಬುದನ್ನು ತಮ್ಮ ಅದೇ ಹೆಸರಿ‌ನ ಲೇಖನದಲ್ಲಿ ವಿವರಿಸಿದ್ದಾರೆ. ಕೃಷಿಗೂ ಕುಂಬಾರಿಕೆಗೂ ಇದ್ದ ಅವಿನಾಭಾವ ಸಂಬಂಧವನ್ನು ಹಾಗೂ ಮಣ್ಣಿಗಿರುವ ವಿಶೇಷ ಗುಣಗಳನ್ನು ಈ ಪ್ರಬಂಧದಲ್ಲಿ ವಿವರಿಸಿದ್ದಾರೆ. ಕುಂಭಕೃಷಿ!

ಚೆನ್ನಾಗಿದೆ ಅಲ್ವಾ ಈ ಹೊಸಪದ?