ದ್ವಿಪದೋಕ್ತಿ ಪ್ರಮೇಯ – ಎರಡು ಚರಾಕ್ಷರಗಳಿರುವ ಗಣಿತೋಕ್ತಿ ಅಥವಾ ದ್ವಿಪದೋಕ್ತಿಯನ್ನು ವಿಸ್ತರಿಸುವಾಗ ಬಳಸುವ ನಿಯಮ.
ಜೀವಿಸೂಸಿತ ಪ್ರಕಾಶ – ಜೀವಿಗಳು ಹೊರಸೂಸುವ ತಾಪರಹಿತ ಬೆಳಕು. ಮಿಂಚುಹುಳುಗಳು, ಬ್ಯಾಕ್ಟೀರಿಯಾ, ಅಣಬೆಗಳು ಮತ್ತು ಸಮುದ್ರದಾಳದಲ್ಲಿರುವ ಅನೇಕ ಮೀನುಗಳು ಇಂತಹ ಬೆಳಕನ್ನು ಹೊರಸೂಸುತ್ತವೆ.
ಜೈವಿಕ ಭೌತಶಾಸ್ತ್ರ ಜೀವಶಾಸ್ತ್ರೀಯ ವಿದ್ಯಮಾನ(ಆಗುಹೋಗುಗಳಿಗೆ) ಭೌತಶಾಸ್ತ್ರದ ನಿಯಮಗಳನ್ನು ಅನ್ವಯಿಸುವ ಜ್ಞಾನಶಿಸ್ತು.
ಎರಡುತಗ್ಗು ಗಾಜು – ಎರಡು ಕಡೆ ತಗ್ಗು ಇರುವ ಗಾಜು ಅಥವಾ ಮಸೂರ.
ಮಹಾ ಸ್ಫೋಟ ಸಿದ್ಧಾಂತ – ಇಡೀ ವಿಶ್ವದ ಎಲ್ಲ ವಸ್ತು ಮತ್ತು ಶಕ್ತಿಗಳು ಭೂತಕಾಲದ ಒಂದು ನಿರ್ದಿಷ್ಟ ಗಳಿಗೆಯೊಂದರಲ್ಲಿ ಸಂಭವಿಸಿದ, ಸಾಂದ್ರವಾದ ಮಹಾ ಮುದ್ದೆಯೊಂದರ ಮಹಾ ಸ್ಫೋಟದಿಂದ ಹುಟ್ಟಿದವು ಎಂದು ಹೇಳುವ, ವಿಶ್ವೋತ್ಪತ್ತಿಯನ್ನು ಕುರಿತ ಸಿದ್ಧಾಂತ.
ದ್ವಿಲೋಹ ಪಟ್ಟಿ – ಪರಸ್ಪರ ಭಿನ್ನವಾದ ವಿಸ್ತಾರ ಸಾಮರ್ಥ್ಯ ಹೊಂದಿರುವ ಎರಡು ಲೋಹಗಳನ್ನು ಒಟ್ಟಿಗೆ ಬೆಸೆದಿರುವ ಅಥವಾ ಜೋಡಿಸಿರುವ ಒಂದು ಪಟ್ಟಿ.
ದ್ವಿರೂಪೀ ಕೋಶ – ಒಟ್ಟಿಗೆ ಬೆಸೆದಂತಹ `ಒತ್ತಡಮೂಲ ವಿದ್ಯುದುತ್ಪಾದಕ ವಸ್ತುಗಳ (ಉದಾಹರಣೆಗೆ ಸಕ್ಕರೆ) ಎರಡು ತಗಡುಗಳನ್ನು ಅಥವಾ ಹಾಳೆಗಳನ್ನು ಹೊಂದಿರುವ ಒಂದು ಉಪಕರಣ. ವಿದ್ಯುತ್ ಹಾಯಿಸಿದಾಗ ಇವುಗಳಲ್ಲಿ ಒಂದು ಹಿಗ್ಗಿ ಇನ್ನೊಂದು ಕುಗ್ಗುವುದರಿಂದ ಇದು ಬಗ್ಗುತ್ತದೆ.
ಬೀಟಾ ವೇಗವರ್ಧಕ ಎಲೆಕ್ಟ್ರಾನುಗಳು ಅತಿ ಹೆಚ್ಚು ಶಕ್ತಿ ಅಂದರೆ ೩೦೦ ಎಂಇವಿ ಅಥವಾ ಇನ್ನೂ ಹೆಚ್ಚು ಶಕ್ತಿ ಪಡೆಯುವಂತೆ ಅವುಗಳ ವೇಗವನ್ನು ಹೆಚ್ಚಿಸುವ ಒಂದು ಉಪಕರಣ.
Like us!
Follow us!